ಭಿಲಾಯ್
	ಮಧ್ಯಪ್ರದೇಶದ ದುರ್ಗ ಜಿಲ್ಲೆಯ ಒಂದು ಕೈಗಾರಿಕಾ ನಗರ.  ಭಿಲಾಯ್ ನಗರ್ ಎಂದು ಕರೆಯುವ ಈ ನಗರ ಉ.ಅ. 21ಲಿ 15 ಮತ್ತು ಪೂ.ರೇ. 81ಲಿ 27 ಗಳಲ್ಲಿದೆ.  ಜನಸಂಖ್ಯೆ 3,19,450 (1981).  ಎರಡನೆಯ ಪಂಚವಾರ್ಷಿಕ ಯೋಜನಾವಧಿಯಲ್ಲಿ ಪ್ರಾರಂಭಿಸಿದ ಮೂರು ಬೃಹದಾಕಾರದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಲ್ಲಿ ಭಿಲಾಯ್ ಒಂದು.  ಕಲ್ಕತ್ತಾದ ಪಶ್ಚಿಮಕ್ಕೆ 720 ಕಿಮೀ ಮತ್ತು ನಾಗಪುರದಿಂದ ಪೂರ್ವಕ್ಕೆ 260 ಕಿಮೀ ಅಂತರದಲ್ಲಿದೆ.  1959 ಫೆಬ್ರುವರಿ 4 ರಂದು ಕಬ್ಬಿಣಕಾರ್ಖಾನೆಯನ್ನೂ ಅದೇ ವರ್ಷ ಅಕ್ಟೋಬರ್ 12ರಂದು ಉಕ್ಕಿನ ಕಾರ್ಖಾನೆಯನ್ನೂ ಇಲ್ಲಿ ಪ್ರಾರಂಭಿಸಲಾಯಿತು.  ಸೋವಿಯತ್ ರಷ್ಯ ಸರ್ಕಾರದ ಸಹಾಯದೊಂದಿಗೆ ಆರಂಭವಾದ ಈ ಕಾರ್ಖಾನೆಗಳ ಉತ್ಪಾದನಾ ಸಾಮಥ್ರ್ಯ ಪ್ರಾರಂಭದಲ್ಲಿ ಹತ್ತು ಲಕ್ಷ ಟನ್‍ಗಳಷ್ಟಿತ್ತು.  ಈ ಸಾಮಥ್ರ್ಯವನ್ನು ಮುಂದೆ ಇಪ್ಪತ್ತು ಲಕ್ಷಕ್ಕೇರಿಸಲಾಯಿತು.  ಭಿಲಾಯ್ ಸುತ್ತಮುತ್ತ ಸುಣ್ಣದ ಕಲ್ಲು ಹೇರಳವಾಗಿ ದೊರೆಯುತ್ತದೆ.  ಈ ಜಿಲ್ಲೆಯಲ್ಲಿ ಕಬ್ಬಿಣದ ಅದುರು ದೊರೆಯುತ್ತದೆ.  ಝೂರಿಯಾದಿಂದ ಇಲ್ಲಿಯ ಕಾರ್ಖಾನೆಗಳಿಗೆ ಕಲ್ಲಿದ್ದಲು ಪೂರೈಕೆ ಆಗುತ್ತದೆ.  ಮಹಾನದಿಗೆ ಹತ್ತು ಚ ಕಿಮೀ ಜಲಾಶಯ ನಿರ್ಮಿಸಿ ಅದರ ನೀರನ್ನು ಕಾಲುವೆಯ ಮೂಲಕ ಭಿಲಾಯ್ ಕಾರ್ಖಾನೆಗೆ ಒದಗಿಸಲಾಗಿದೆ.  ಇಂದು ಕಬ್ಬಿಣ ಉಕ್ಕು ತಯಾರಿಕೆಯಲ್ಲಿ ಭಿಲಾಯ್ ಪ್ರಸಿದ್ಧವಾಗಿದೆ.  ಇಲ್ಲಿಯ ಕಾರ್ಖಾನೆಗಳಿಂದ ಉಂಟಾಗುವ ವಿಪರೀತ ಉಷ್ಣತೆಯಿಂದಾಗಿ ಭಿಲಾಯ್ ನಗರವಾಸಿಗಳಿಗೆ ತೊಂದರೆಯಾಗಬಾರದೆಂದು ಕಾರ್ಖಾನೆ ಪ್ರದೇಶ ಮತ್ತು ನಗರದ ನಡುವೆ 1.6 ಕಿಮೀ ವಿಸ್ತಾರದ ಅರಣ್ಯ ಬೆಳೆಸಲಾಗಿದೆ. 
(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ